Pages

Sunday, November 10, 2013

ವಿಕ್ಟರಿ

ಒಂದು ಹಾಸ್ಯಮಯ ಚಿತ್ರಕ್ಕೆ ಏನಿರಬೇಕು? ಎಂಬ ಪ್ರಶ್ನೆಗೆ ಉತ್ತರ ಅದೆನಿರಲಿ ಇರದಿರಲಿ ನಗಿಸಿದರೆ ಸಾಕು ಎಂಬುದು ನಿಮ್ಮ ಉತ್ತರವಾದರೆ ನಟ ಶರಣ್ ಅಭಿನಯದ ವಿಕ್ಟರಿ ಚಿತ್ರವನ್ನು ಧಾರಾಳವಾಗಿ ಹಾಸ್ಯಮಯ ಚಿತ್ರ ಎನ್ನಬಹುದು. ಯಾಕೆಂದರೆ ಇಲ್ಲಿರುವ ಪ್ರತಿ ದೃಶ್ಯವೂ ಹಾಸ್ಯಮಯವಾದವುಗಳೇ. ಮತ್ತು ಅವುಗಳನ್ನು ನಗಿಸಲೆಂದೇ ರಚಿಸಲಾಗಿದೆ. ತರ್ಕ, ಅರ್ಥ ಮತ್ತು ವಾಸ್ತವದ ಅಂಶಗಳನ್ನು ಲವಲೇಶವೂ ಗಮನಕ್ಕೆ ತೆಗೆದುಕೊಳ್ಳದೆ ಸುಮ್ಮನೆ ನಗಿಸುವ ನಿಟ್ಟಿನಲ್ಲಿ ಹೆಣೆದಿರುವ ಚಿತ್ರಕಥೆ ಸಿನೆಮಾವನ್ನು ಹಾಸ್ಯಮಯವನ್ನಾಗಿ ಮಾಡಿದೆ.
ಚಿತ್ರದ ನಾಯಕನ ಬದುಕಿನಲ್ಲಿ ಮೂರನೆಯ ವ್ಯಕ್ತಿಯಿಂದಾಗಿ ಬಿರುಗಾಳಿ ಎದ್ದುತ್ತದೆ. ಇಡೀ ಬದುಕೇ ಬೇಸರವಾಗಿ ಸಾಯಲೇ ಬೇಕೆಂದು ನಿರ್ಧರಿಸಿ ಸಾಯುವುದಕ್ಕೆ ಸಾವಿರಾರು ಮಾರ್ಗಗಳನ್ನು ಹುಡುಕುತ್ತಾನೆ. ಅದೇ ಮೊದಲಾರ್ಧದ ಕಥೆ. ಸಾಯಲಿಕ್ಕೆ ಹೊರಡುವ ನಾಯಕ ಸಾಯುವುದಿಲ್ಲ. ಆದರೆ ಅದರ ಸುಳಿ ಅವನನ್ನು ಬೇರೆಲ್ಲಿಗೂ ಕರೆದುಕೊಂಡು ಸಾಗಿಬಿಡುತ್ತದೆ. ಎಲ್ಲಾ ಆಗಿ ಎಲ್ಲಾ ಸರಿಹೋಗಿ ಇಲ್ಲಾ ಸಾಯುವುದಿಲ್ಲ ಇನ್ನು ಬದುಕಬೇಕು ಎಂಬ ನಿರ್ಧಾರವನ್ನು ನಾಯಕ ಕೈಗೊಳ್ಳುತ್ತಾನೆ. ಆದರೆ ಈಗ ಸಾವು ಬೆನ್ನಟ್ಟುತ್ತದೆ. ಇದು ಚಿತ್ರದ ಒಂದು ಸಾಲಿನ ಕಥೆ. ಆದರೆ ಚಿತ್ರಕಥೆಯಲ್ಲಿ ಹಲವಾರು ಕವಲುಗಳಿವೆ. ದೃಶ್ಯಗಳಿವೆ. ಕೆಲವು ನಗಿಸುತ್ತವೆ. ಮತ್ತೆ ಕೆಲವು ಸಿಲ್ಲಿ ಎನಿಸುತ್ತವೆ. ಅವೆಲ್ಲಾ ನೋಡುಗನ ಭಾವಕ್ಕೆ ಭಕುತಿಗೆ ಸಂಬಂಧಿಸಿದ್ದು.
ಚಿತ್ರದಲ್ಲಿ ಶರಣ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಾರಂಭದಿಂದಲೇ ನಗಿಸಲು ಪ್ರಯತ್ನಿಸುವ ಶರಣ್ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.ಒಬ್ಬನ ಜಾಗದಲ್ಲಿ ಇನ್ನೊಬ್ಬನನ್ನು ತಪಪಾಗಿ ಅರ್ಥೈಸಿಕೊಳ್ಳುವುದು, ಒಬ್ಬನ ಹಿಂದೆ ಬೀಳಲು ಹೋಗಿ ಮತ್ತೊಬ್ಬನ ಹಿಂದೆ ಬೀಳುವುದು ಮುಂತಾದ ಒಂದೇ ರೂಪದ ಇಬ್ಬರ ನಡುವಿನ ಜಂಜಾಟಗಳು ಚಿತ್ರರಂಗಕ್ಕೆ ಹೊಸದಲ್ಲ. ಇಲ್ಲೂ ಅದೇ ಆಗಿದೆ. ಹಾಗೆಯೇ ಇಲ್ಲಿನ ಒಂದಷ್ಟು ದೃಶ್ಯಾವಳಿಗಳನ್ನು ನೀವು ಬೇರೆ ಬೇರೆ ಭಾಷೆಯಾ ಚಿತ್ರಗಳಲ್ಲಿ ನೋಡಿರಲಿಕ್ಕೂ ಸಾಕು.ಹಾಗಂತ ಈ ಸಿನೆಮಾ ರೀಮೇಕ್ ಅಲ್ಲ. ಒಂದು ತೆಳುವಾದ ಕಥೆಯನ್ನು ಹಾಸ್ಯಮಯವಾಗಿ ಗಟ್ಟಿ ಮಾಡುವಾಗ ಇದೆಲ್ಲಾ ಆಗಿದೆ. ಈ ಚಿತ್ರದ ಕಥೆ ಚಿತ್ರಕಥೆಯನ್ನು ರಾಂಬೊ ಚಿತ್ರದ ಶ್ರೀನಾಥ್ ಬರೆದಿದ್ದಾರೆ. ಆದರೆ ಇಂತಹದ್ದೇ ಗಂಭೀರ ಸನ್ನಿವೇಶವೂ ಕಾಮಿಡಿ ತರಹದಲ್ಲಿ ನಿರೂಪಿಸಿರುವುದು ಕೆಲವೊಮ್ಮೆ ಚಿತ್ರದಲ್ಲಿನ ದೃಶ್ಯದ ಗಂಭೀರತೆಯನ್ನು ಮುಚ್ಚಿಹಾಕಿಬಿಟ್ಟಿದೆ. ಸಾಯುವ ನಾಯಕ ನಗು ತರಿಸುತ್ತಾನೆ ಹೊರತು ನೋವುಂಟುಮಾಡುವುದಿಲ್ಲ. ಹಾಗೆಯೇ ನಿರ್ದೇಶಕ ನಂದಕಿಶೋರ್ ರವರ ಬಿಡುಗಡೆಯಾದ ಮೊದಲ ಚಿತ್ರವಿದು. ಈಗಾಗಲೇ ಪತಾಯ್ಸು ಎನ್ನುವ ಚಿತ್ರವನ್ನು ನಿರ್ದೇಶನ ಮಾಡಲು ಹೋಗಿ ಅದು ಅರ್ಥಕ್ಕೆ ನಿಂತಾಗ ಈ ಚಿತ್ರವನ್ನು ಮಾಡಿದ್ದಾರೆ ಮತ್ತು ಭರವಸೆ ಹುಟ್ಟುಹಾಕಿದ್ದಾರೆ.
ತಾರಾಗಣದ ವಿಷಯಕ್ಕೆ ಬಂದರೆ ಇಡೀ ಚಿತ್ರದ ತುಂಬಾ ಅನುಭವಿ ಕಲಾವಿದರ ದಂಡೆ ಇದೆ. ಗಿರಿಜಾ ಲೋಕೆಶ್, ಸಾಧು ಕೋಕಿಲ, ತಬಲಾ ನಾಣಿ, ರವಿಶಂಕರ್ಅವಿನಾಶ,ರಮೇಶ್ ಭಟ್, ಮಿತ್ರ, ಮಿಮಿಕ್ರಿ ದಯಾನಂದ್,ಕುರಿಗಳು ಪ್ರತಾಪ್ ಹೀಗೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗೆ ನಾಯಕಿ ಆಸ್ಮಿತಾರಿಗೆ ಅಷ್ಟಾಗಿ ಅವಕಾಶಗಳಿಲ್ಲ. ಇಬ್ಬರ ಶರಣ ಆಟದ ನಡುವೆ ಹಾಡುಗಳು ಮತ್ತು ಒಂದೆರೆಡು ದೃಶ್ಯಗಳಿಗಷ್ಟೇ ಮೀಸಲಾಗಿದ್ದಾರೆ.
ಅರ್ಜುನ್ ಜನ್ಯರ ಸಂಗೀತ ನಿರ್ದೇಶನದಲ್ಲಿ ಒಂದು ಹಾಡು ಈಗಾಗಲೇ ಹಿಟ್ ಆಗಿದೆ. ಅದೇ ಚಿತ್ರದ ಹೈಲೈಟ್ . ಶೇಖರಚಂದ್ರ ಛಾಯಾಗ್ರಹಣ, ಪ್ರಶಾಂತ್ ಸಂಭಾಶನೆಗಳೂ ಕೂಡ ಸಿನಿಮಾಕ್ಕೆ ಬಲ ತುಂಬಿವೆ.
ಸುಮ್ಮನೆ ಎರಡೂವರೆ ಘಂಟೆ ಬೇರೇನನ್ನೂ ಯೋಚಿಸದೆ ಸುಮ್ಮನೆ ಒಂದಷ್ಟು ಮಜಾ ತೆಗೆದುಕೊಳ್ಳುತ್ತೇನೆ ಎಂದರೆ ವಿಕ್ಟರಿ ಉತ್ತಮ ಆಯ್ಕೆಯಾಗುತ್ತದೆ. ಅದರಾಚೆಗೆ ಬೇರೆಯದನ್ನು ನಿರೀಕ್ಷಿಸಿದರೆ ಅದು ತಪ್ಪಾಗುತ್ತದೆ.

No comments:

Post a Comment