Pages

Sunday, November 10, 2013

ಪ್ರೀತಂ ಗುಬ್ಬಿ ಸ್ಟೈಲ್ ನ ಇನ್ನೊಂದು ಚಿತ್ರ

ನಮ್ ದುನಿಯಾ ನಮ್ ಸ್ಟೈಲ್ ಅಂದರೆ ನಮ್ಮದೆ ಆದ ಒಂದು ಪ್ರಪಂಚದಲಿ, ನಾವು ನಮ್ಮದೆ ಆದ ಶೈಲಿಲಿ ಬದುಕ್ತೀವಿ ಅಂತ ಅರ್ಥ. ಈ ಟೈಟಲ್ ನಿರ್ದೇಶಕರಿಗೆ ಅನ್ವಯಿಸುವಂತಿದೆ. ಏಕೆಂದರೆ ಇದುವರೆಗಿನ ಅವರ ಎಲ್ಲಾ ಚಿತ್ರಗಳಲ್ಲೂ ಕಥೆ ಇರಲಿಲ್ಲ, ಈ ಚಿತ್ರದಲ್ಲೂ ಕೂಡ ಒಂದು ಗಟ್ಟಿ ಕಥೆ ಇಲ್ಲ.
ಅಲ್ಲಿಗೆ ಅವರದೆ ಶೈಲಿಯ ಚಿತ್ರಗಳಿಂದಾಚೆ ನಿರ್ದೇಶಕರು ಇಣುಕುವ ಗೋಜಿಗೆ ಹೋಗಿಲ್ಲ. ಅಷ್ಟರ ಮಟ್ಟಿಗೆ ಅವರು ಅವರದೆ ಆದ ಒಂದು ಪ್ರಪಂಚ ಕಟ್ಟಿಕೊಂಡಿದ್ದಾರೆ.ಹಾಗಂತ ಇದನ್ನ ಸಂಪೂರ್ಣವಾಗಿ ನಕರಾತ್ಮಕ ದೃಷ್ಟಿಕೋನದಿಂದ ನೋಡೋಕೆ ಆಗಲ್ಲ. ಏಕೆಂದ್ರೆ ಒಂದು ಗಟ್ಟಿ ಕಥೆ ಇಲ್ಲದೆಯೂ ಕೂಡ ಪ್ರೇಕ್ಷಕರನ ಎರಡುಕಾಲು ಗಂಟೆ ಥಿಯೇಟರ್ ನ ಒಳಗೆ ಹಿಡಿದಿಟ್ಟುಕೊಳ್ಳೋದು ಅಷ್ಟು ಸುಲಭ ಅಲ್ಲ.
ಆ ರೀತಿಯಿಂದ ನೋಡಿದರೆ ನಿರ್ದೇಶಕರ ಜಾಣ್ಮೆಯ ಕುರಿತು ಮಾತಾಡಲೆ ಬೇಕು. ಹೌದು ಒಂದು ಚಿತ್ರಕ್ಕೆ ನೋಡಿಸಿಕೊಂಡು ಹೋಗುವಂತಹ ಚಿತ್ರಕಥೆ ಹೆಣೆಯೋದರಲ್ಲಿ ಪ್ರೀತಂ ಎತ್ತಿದಕೈ, ಆ ಕೆಲಸವನ್ನು ಅವರು ನಮ್ ದುನಿಯಾ ನಮ್ ಸ್ಟೈಲ್ ನಲ್ಲೂ ಮುಂದುವರಿಸಿದ್ದಾರೆ.
ಕಥೆ ಸಿಂಪಲ್ ಚಿತ್ರದ ಮೂವರು ನಾಯಕರಲ್ಲಿ ಒಬ್ಬನಾದ ಪ್ರೀತಂ ಕಳೆದ ಆರು ತಿಂಗಳಿಂದ ತನ್ನದೆ ಕಂಪೆನಿಯಲ್ಲಿ ಕೆಲಸ ಮಾಡುವ ಮಾಯಾಳನ್ನು ಇಷ್ಟಪಡುತ್ತಿರುತ್ತಾನೆ. ಅವಳಿಗೆ ಹೇಳಬೇಕು ಅನ್ನುವಷ್ಟರಲ್ಲಿ ಅವಳು ಇದ್ದಕಿದ್ದ ಹಾಗೆ ಮಲೇಶಿಯಾಕ್ಕೆ ಕಂಪನಿ ಕೆಲಸದ ನಿಮಿತ್ತ ಹೊರಟು ಬಿಡುತ್ತಾಳೆ. ಅವಳನ್ನು ಬಿಟ್ಟಿರಲಾರದ ಪ್ರೀತಂ ಅವಳನ್ನು ಹುಡುಕಿಕೊಂಡು ಮಲೇಶಿಯಾಕ್ಕೆ ಹೋಗಲು ನಿರ್ಧರಿಸುತ್ತಾನೆ. ಸ್ನೇಹಿತರಾದ ಶೆಟ್ಟಿ, ಯೋಗಿ, ಹಾಗೂ ಅಚಾನಕ್ಕಾಗಿ ಸಿಕ್ಕ ಮಿಲನ ಎಂಬ ಹುಡುಗಿ ಕೂಡ ಅವನಿಗೆ ಜೊತೆಯಾಗುತ್ತಾರೆ. ಮುಂದೇನು? ಥಿಯೇಟರ್ ನಲ್ಲೇ ನೋಡಬೇಕು.
ಮೇಲ್ನೋಟಕ್ಕೆ ಚಿತ್ರ ಎಲ್ಲೂ ಬೋರ್ ಹೊಡೆಸದಿದ್ದರೂ ಕೂಡ, ಚಿತ್ರಕಥೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು ಅನಿಸುತ್ತದೆ. ಚಿತ್ರದ ಪ್ರತಿ ದೃಶ್ಯಗಳು ಬಿಡಿಬಿಡಿಯಾಗಿ ನೋಡಿದಾಗ ಇಷ್ಟವಾದರೂ ಕೂಡ ಒಂದು ಹಿಡಿ ಚಿತ್ರವಾಗಿ ನೋಡಿದಾಗ, ಮನಸ್ಸಿಗೆ ಮುಟ್ಟುವಂತಹ ಅಂಶಗಳ ಕೊರತೆ ಎದ್ದು ಕಾಣುತ್ತದೆ.
ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿ ಮೂಡಿ ಬಂದಿದ್ದು, ವೇಣು ಛಾಯಗ್ರಹಣ ಕಣ್ಮನ ಸೆಳೆಯುವಂತಿದೆ, ಹಾಗೆ ಶಾನ್ ರೆಹಮಾನ್ ಸಂಗೀತದ ಎರಡು ಹಾಡುಗಳು ಮತ್ತೆ ಮತ್ತೆ ಗುನುಗುವಂತಿವೆ. ಆದರೆ ರೀರೆಕಾರ್ಡಿಂಗ್ ಕೆಲಸ ಅಷ್ಟು ಇಂಪ್ರೆಸ್ ಆಗುವಂತಿಲ್ಲ. ಹಾಗೆ ಕಾಶ್ಮೀರದಲ್ಲಿ ಚಿತ್ರಿಸಿರುವ ಹಾಡುಗಳ ಕೋರಿಯೋಗ್ರಾಫಿ ಕೂಡ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ.
ಇನ್ನೂ ನಟನೆಯ ವಿಷಯಕ್ಕೆ ಬಂದರೆ, ಮದರಂಗಿ ಖ್ಯಾತಿಯ ಸುನೀಲ್ ನಾಗಪ್ಪ, ಯೋಗಿ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿಸಿದ್ದಾರೆ ಅನ್ನುವುದಕಿಂತ ಪಾತ್ರವೆ ಆಗಿ ಹೋಗಿದ್ದಾರೆ ಎನ್ನಬಹುದಾದಷ್ಟು ಅಧ್ಬುತವಾಗಿ ನಟಿಸಿದ್ದಾರೆ. ಪ್ರೀತಂ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಿಖಿತ್ ತಮ್ಮ ನಟನೆಯ ಮೂಲಕ ಗಮನ ಸೆಳೆಯುತ್ತಾರೆ.
ಇನ್ನೂ ಈ ಚಿತ್ರದ ನಿಜವಾದ ಅಚ್ಚರಿ ಅಂದರೆ ಮಿಲನ ನಾಗರಾಜ್ ನಟನೆ. ಆಕೆಗೆ ಕಣ್ಣಿನಲ್ಲೆ ಭಾವನೆಗಳನ್ನು ವ್ಯಕ್ತಪಡಿಸುವ ಕಲೆ ಸಿದ್ದಿಸಿದ್ದು, ಈ ಚಿತ್ರದಲ್ಲಿ ಆಕೆಗಿರುವ ಅವಕಾಶದಲ್ಲೆ ತಾನೊಬ್ಬ ಭರವಸೆಯ ನಟಿಯಾಗಬಲ್ಲೆ ಎಂದು ತೋರಿಸಿದ್ದಾರೆ. ಉಳಿದಂತೆ ವಿನಾಯಕ ಜೋಶಿ,ರಂಗಾಯಣ ರಘು, ಸಾಧುಕೋಕಿಲ, ಸೋನಿಯಾ ಗೌಡ, ಕಾವ್ಯ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.


ಮುಂಗಾರುಮಳೆಯ ನಂತರ ಪ್ರವರ್ಧಮಾನಕ್ಕೆ ಬಂದವರು ಪ್ರೀತಂ ಗುಬ್ಬಿ. ಅವರು ಸ್ವತಂತ್ರವಾಗಿ ಚಿತ್ರ ನಿರ್ದೇಶಿಸುತ್ತಾರೆ ಎಂದಾಗ ನಿರೀಕ್ಷೆ ಹೆಚ್ಚಿದ್ದು ನಿಜ. ಆದರೆ ಹಾಗೆ ಸುಮ್ಮನೆ ಚಿತ್ರ ನೋಡಿದ ನಂತರ ಸ್ವಲ್ಪ ಎಳಸುತನವಿದೆಯಲ್ಲ ಎನಿಸಿದರೂ ಮೊದಲ ನಿರ್ದೇಶನವಾದ್ದರಿಂದ ಒಂದಷ್ಟು ಮಾರ್ಜಿನ್ ಕೊಟ್ಟದ್ದಿತ್ತು. ಆದರೆ ಅದಾದ ನಂತರದ ಚಿತ್ರಗಳಲ್ಲೂ ಪ್ರೀತಂ ಗುಬ್ಬಿ ಬೆಳೆಯಲಿಲ್ಲ. ತೀರಾ ಒಪ್ಪುವಂತಹ ಚಿತ್ರಕಥೆಯ ಬದಲಿಗೆ ಸಿನಿಮೀಯ ಎನಿಸಿಬಿಡುವ ಚಿತ್ರಕಥೆಯೇ ಚಿತ್ರದಲ್ಲಿನ ಭಾವವನ್ನು ತಿಂದು ಹಾಕಿದ್ದು ನಿಜ. ಹಠಕ್ಕೆ ಬಿದ್ದವರಂತೆ ಒಂದಾದ ಮೇಲೆ ಇನ್ನೊಂದು ಚಿತ್ರ ಮಾಡುವುದಕ್ಕಿಂತ ಒಂದು ಉತ್ತಮ ಕಥೆಯ ಚಿತ್ರ ಮಾಡಲಿ ಎಂಬುದು ಚಿತ್ರರಸಿಕರ ಆಸೆ. ಯಾಕೆಂದರೆ ಮುಂಗಾರುಮಳೆಯಿಂದ ಮಿಂದು ಒದ್ದೆಯಾದ ಪ್ರೇಕ್ಷಕ ಇನ್ನೂ ಅದರ ಗುಂಗಿನಿಂದ ಹೊರಬಂದಿಲ್ಲ. ಇದನ್ನು ಪ್ರೀತಂ ಗುಬ್ಬಿ ಅರಿತುಕೊಳ್ಳಲಿ ಮತ್ತು ಮುಂದಿನ ಚಿತ್ರದಲ್ಲಿ ಅತ್ಯುತ್ತಮ ಕಥೆ/ಚಿತ್ರಕಥೆಯಿರಲಿ ಎಂಬ ಆಶಯ ನಮ್ಮದು.

No comments:

Post a Comment