Pages

Sunday, November 10, 2013

ಲೂಸಿಯಾ

ಲೂಸಿಯಾ ಬಹು ನಿರೀಕ್ಷಿತ ಚಿತ್ರ. ಪವನ್ ಕುಮಾರ ನಿರ್ದೇಶನದ ಎರಡನೆಯ ಚಿತ್ರ.ಈ ಹಿಂದೆ ಲೈಫು ಇಷ್ಟೇನೆ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡಿದ್ದ ಪವನ್ ಕುಮಾರ್ ಪ್ರೇಕ್ಷಕರನ್ನೇ ನಿರ್ಮಾಪಕರನ್ನಾಗಿ ಮಾಡಿ ತೆರೆಗರ್ಪಿಸಿದ ಚಿತ್ರವಿದು.ಚಿತ್ರದ ಕಥೆಯಲ್ಲಿ ಹೊಸತನವಿದೆ. ಹಾಗೆಯೇ ನಿರೂಪಣೆಯಲ್ಲಿ ವಿಭಿನ್ನತೆಯಿದೆ. ಇಂಗ್ಲಿಷಿನಲ್ಲಿ ಬಂದ ನೋಲನ್ ನಿರ್ದೇಶನದ ಮೆಮೆಂಟೊ ಚಿತ್ರದ ತಂತ್ರವನ್ನು ಪವನ್ ಕುಮಾರ್ ತಮ್ಮ ಚಿತ್ರಕ್ಕೆ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಕನಸು ಮತ್ತು ನನಸು, ಅಥವಾ ಭ್ರಮೆ ಅಥವಾ ವಾಸ್ತವ ಇವುಗಳ ನಡುವೆ ಸುತ್ತುವ ಕಥೆ ಚಿತ್ರದ್ದು. ಚಿತ್ರದ ನಾಯಕ ಸಾಮಾನ್ಯ ಕುಟುಂಬದವನು. ಹೆಚ್ಚು ಓದಿಲ್ಲವಾದ್ದರಿಂದ ಚಿತ್ರಮಂದಿರದಲ್ಲಿ ಬೆಳಕು ತೋರಿಸಿ ಪ್ರೇಕ್ಷಕರಿಗೆ ಕುರ್ಚಿ ತೋರಿಸುವ ಕೆಲಸ ಮಾಡುವವನು. ಬೆಳಗ್ಗಿಂದ ರಾತ್ರಿಯವರೆಗೆ ಚಿತ್ರಮಂದಿರ ಮತ್ತು ಚಿತ್ರವನ್ನೇ ಬದುಕನ್ನಾಗಿ ಮಾಡಿಕೊಳ್ಳುವ ನಾಯಕನಿಗೆ ಅದರಾಚೆಯ ಬದುಕು ಕೈಗೆ ನಿಲುಕುವುದಿಲ್ಲ. ರಾತ್ರಿ ಸಮಯದಲ್ಲಿ ನಿದ್ರೆ ಬರುವುದೇ ಇಲ್ಲ. ಹಾಗಾಗಿ ಯಾರೋ ಒಬ್ಬರ ಸಲಹೆಯಂತೆ ಲೂಸಿಯಾ ಎನ್ನುವ ಗುಳಿಗೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಅವನ ಕನಸಿನ ಜಾತ್ರೆ. ಅದು ಕನಸಿನ ಜಾತ್ರೆಯ ವಾಸ್ತವದಾ ಮೆರವಣಿಗೆಯ..ತಿಳಿಯಲು ಚಿತ್ರಮಂದಿರಕ್ಕೆ ಹೊಕ್ಕರೆ ಒಳ್ಳೆಯದು.
ಪವನ್ ಚಿತ್ರಕಥೆಯನ್ನು ತುಂಬಾ ಬುದ್ದಿವಂತಿಕೆಯಿಂದ ಜಾಗರೂಕತೆಯಿಂದ ರಚಿಸಿದ್ದಾರೆ.ಯಾಕೆಂದರೆ ನಿರೂಪಣೆ ಅಲ್ಪಸ್ವಲ್ಪ ಏರುಪೇರಾದರೂ ಗೊಂದಲವಾಗುವ ಸಾಧ್ಯವಿತ್ತು.ಆದರೆ ಅದನ್ನೂ ಮೀರಿ ಚಿತ್ರ ಕೊನೆ ಕೊನೆಯಲ್ಲಿ ಗೊಂದಲಮಯವಾಗುತ್ತದೆ. ಅವುಗಳನ್ನು ನಿವಾರಿಸಿ ಒಂದು ಸ್ಪಷ್ಟ ಉತ್ತರವನ್ನು ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರಾದರೂ ಅದರ ಅವಧಿ ಮಾತು ದ್ರವ್ಯ ಕಡಿಮೆಯಿರುವುದರಿಂದ ಪ್ರೇಕ್ಷಕರಲ್ಲಿನ ಪ್ರಶ್ನೆಗಳು ಹಾಗೆಯೇ ಉಳಿದು ಒಂದು ಅಸಂತೃಪ್ತಿ ಉಂಟಾಗುತ್ತದೆ. ಏನಾಯಿತು..ಯಾಕಾಯಿತು ಇದೇನು..ಅದೇನು ಎನ್ನುವ ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತದೆ.
ಚಿತ್ರದಲ್ಲಿ ಎಲ್ಲವೂ ಇದೆ. ಹಾಡು ಕುಣಿತ ರಂಗುರಂಗಾದ ಒಳಾಂಗಣ,ಹೊಡೆದಾಟ ಹೀಗೆ.ಹಾಗೆಯೇ ಈವತ್ತಿನ ಚಿತ್ರಜಗತ್ತಿನ ಒಳಹೊರಗು, ಸ್ಟಾರ್ ಒಬ್ಬನ ವೈಯಕ್ತಿಕ ತುಮುಲ ಎಲ್ಲವೂ ಇದೆ. ಜೊತೆಗೊಂದು ಚಂದನೆಯ ಪ್ರೇಮಕತೆಯೂ ಇದೆ. ಆದರೂ ಏನೋ ಕೊರತೆಯಿರುವುದು ಎದ್ದು ಕಾಣುತ್ತದೆ.
ನಾಯಕನಾಗಿ ನೀನಾಸಂ ಸತೀಶ್ ಅತ್ಯುತ್ತಮ ಅಭಿನಯ ನೀಡಿದ್ದಾರೆ. ನಾಯಕಿಯಾಗಿ ಶ್ರುತಿ ಹರಿಹರನ್ ಗಮನ ಸೆಳೆಯುತ್ತಾರೆ.ತಿನ್ನ ಬೇಡ ಕಮ್ಮಿ  ಹಾಡು ಇಷ್ಟವಾದರೂ ಅದನ್ನು ಚಿತ್ರೀಕರಿಸಿರುವ ರೀತಿ ನಿರಾಸೆ ಉಂಟುಮಾಡುತ್ತದೆ. ಪೂರ್ಣ ಚಂದ್ರ ತೇಜಸ್ವಿಯವರ ಸಂಗೀತದಲ್ಲಿ ಕಸುವಿದೆ. ಹಾಗೆಯೇ ಛಾಯಾಗ್ರಹಣವೂ ಉತ್ತಮವಾಗಿದೆ. ಎಲ್ಲವೂ ಇದ್ದು ಏನೂ ಇಲ್ಲವೆನಿಸಿಕೊಳ್ಳುವ ಲೂಸಿಯ ವಿಮರ್ಶಕರ ವಲಯದಲ್ಲಿ ಬುದ್ದಿವಂತ ಚಿತ್ರ ಎನಿಸಿಕೊಳ್ಳಬಹುದಾದರೂ ಪ್ರೇಕ್ಷಕನ ದೃಷ್ಟಿಯಲ್ಲಿ ಸಾಮಾನ್ಯ,ಸಾಧಾರಣ ಚಿತ್ರವಾಗಷ್ಟೇ ನಿಲ್ಲುತ್ತದೆ.

No comments:

Post a Comment