Pages

Sunday, November 10, 2013

ಬುಲ್ ಬುಲ್



ಬುಲ್ ಬುಲ್ ಚಿತ್ರ ಭರ್ಜರಿ ಡ್ರ್ಯಾಗ್ ರೇಸ್ ಮೂಲಕ ಶುರುವಾಗುತ್ತದೆ. ಅದರ ಹಿಂದೆಯೇ ಒಂದು ರಣ ಫೈಟು, ನಂತರ ಒಂದು ಹಾಡು ಇಷ್ಟಾದ ಮೇಲೆ ಅಸಲಿ ಕಥೆಗೆ ಅಡಿಪಾಯ ಸಿಗುತ್ತದೆ. ಆನಂತರ ಮಧ್ಯಂತರದವರೆಗೆ ನಾಯಕ-ನಾಯಕಿ ಸ್ವಿಜರ್ಲ್ಯಾಂಡ್ ನಲ್ಲಿ ಓಡಾಡಿ ಪ್ರೇಮಕಥೆಯನ್ನು ಸೃಷ್ಟಿಸುತ್ತಾರೆ. ದ್ವಿತೀಯಾರ್ಧದಲ್ಲಿ ನಮಗೆ ಗೊತ್ತಾಗುವ ವಿಷಯವೆಂದರೆ ಮೊದಲಾರ್ಧದ ಕಥೆ ಬರೀ ಕಟ್ಟು ಕಥೆ, ಅಸಲಿ ಕಥೆ ಈಗ ಪ್ರಾರಂಭವಾಗಿದೆ ಎಂಬುದು. [ ಇತ್ತೀಚಿಗೆ ಬಿಡುಗಡೆಯಾದ ಸುದೀಪ್ ಅಭಿನಯದ ‘ಭಚ್ಚನ್’ ಕೂಡ ಇದೆ ರೀತಿಯ ಅಂದರೆ ಮೊದಲಾರ್ಧ ಕಟ್ಟು ಕಥೆ, ಉಳಿದರ್ದ ನಿಜ ಕಥೆ  ಸ್ವರೂಪವನ್ನು  ಹೊಂದಿತ್ತು.ಅಂದರೆ ಖಳನ ಕಪಿಮುಷ್ಟಿಗೆ ಸಿಲುಕುವ ನಾಯಕ ಬುದ್ಧಿವಂತಿಕೆಯಿಂದ ಅವನ ಕೈಯಿಂದ ಪಾರಾಗಲು ಒಂದು ಕಪೋಲ ಕಲ್ಪಿತ ಕಥೆಯನ್ನು ಕಟ್ಟುತ್ತಾನೆ. ಅದನ್ನು ನಂಬುವ ಖಳ ಅವನನ್ನು ಬಿಟ್ಟುಬಿಡುತ್ತಾನೆ. ಅಸಲಿ ಕಥೆ ಆಮೇಲೆ ಪ್ರಾರಂಭವಾದರೂ ಅದರಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನಿಲ್ಲ. ಬಾಲ್ಯದ ಗೆಳತಿಯನ್ನು ಪ್ರೀತಿಸುತ್ತಲೇ ಇರುವ ನಾಯಕ, ಬಾಲ್ಯದಲ್ಲೇ ವಿದೇಶ ಸೇರಿಕೊಂಡ ನಾಯಕಿ..ಮತ್ತೀಗ ಸ್ವದೇಶಕ್ಕೆ ಬಂದಿದ್ದಾಳೆ. ಹಾಗಾಗಿ ಹಳೆಯ ಪ್ರೇಮವನ್ನು ನವೀಕರಿಸಿ ಅವಳನ್ನು ಗೆಲ್ಲಬೇಕೆಂಬುದು ನಾಯಕನ ಗುರಿ..ಮುಂದೆ..ದರ್ಶನ್ ನಾಯಕರಾಗಿ ಅಭಿನಯಿಸಿರುವುದರಿಂದ ಮುಂದಿನದ್ದನ್ನು ನಾವು ನೀವು ಸುಲಭವಾಗಿ ಊಹಿಸಬಹುದು. ಒಂದೆ ಮಾತಲ್ಲಿ ಹೇಳುವುದಾದರೆ : ಸುಖಾಂತ್ಯ.
ಬುಲ್ ಬುಲ್ ತೆಲುಗಿನ ಪ್ರಭಾಸ್ ಅಭಿನಯದ ಡಾರ್ಲಿಂಗ್ ಚಿತ್ರದ ರೀಮೇಕು .ಇದನ್ನು ಈ ಹಿಂದೆ ದರ್ಶನ ಅಭಿನಯದ ಪೊರ್ಕಿ ನಿರ್ದೇಶಿಸಿದ್ದ ಎಂ.ಡಿ.ಶ್ರೀಧರ್ ಕನ್ನಡೀಕರಿಸಿದ್ದಾರೆ. ಆದರೆ ಇಲ್ಲಿ ಮೊದಲಾರ್ಧವನ್ನು ಹಾಲಿವುಡಿನ ಆಡಮ್ ಸ್ಯಾಂಡಲರ್ ಅಭಿನಯದ ೫೦ ಫಸ್ಟ್ ಡೇಟ್ಸ್ ಚಿತ್ರದಿಂದ ಎರವಲು ಪಡೆಯಲಾಗಿದೆ.ಚಿತ್ರದ ಮೊದಲಾರ್ಧಕ್ಕಿಂತಲೂ ದ್ವಿತೀಯಾರ್ಧ ರಸಭರಿತವಾಗಿದೆ. ಮೊದಲಾರ್ಧದ ಕಟ್ಟು ಕಥೆಯಲ್ಲಿ ಒಂದಷ್ಟು ಲವಲವಿಕೆಯಿದ್ದರೂ ಭಾವನಾತ್ಮಕ ಅಂಶಗಳು ಪೇಲವವಾಗಿದೆ. ಆದರೂ ಹಾಡುಗಳು, ಮತ್ತು ಸ್ವಿಜರ್ಲ್ಯಾಂಡ್ ನ ಸುಂದರ ಹೊರಾಂಗಣ ದೃಶ್ಯಗಳು ಬೋರಾಗುವುದನ್ನು ಸ್ವಲ್ಪದರಲ್ಲಿ ತಪ್ಪಿಸಿವೆ ಎನ್ನಬಹುದು.ದ್ವಿತೀಯಾರ್ಧದಲ್ಲಿ ಹಳೆಯ ಗೆಳೆಯರೆಲ್ಲಾ ತಮ್ಮ ಕುಟುಂಬ ಸಮೇತ ಒಂದೆಡೆ ಸೇರುವುದು, ಅಲ್ಲಿ ನಡೆಯುವ ಕೀಟಲೆ, ಹಾಸ್ಯ ಸನ್ನಿವೇಶಗಳು ನಗೆಯುಕ್ಕಿಸುತ್ತವೆ. ಅಲ್ಲೇ ನಾಯಕ ನಾಯಕಿಯ ಪ್ರೀತಿಯನ್ನು ಗೆಲ್ಲಲು ಮಾಡುವ  ಕಸರತ್ತುಗಳು ,  ಅದಕ್ಕಾಗಿ ನಾಯಕನ ಗೆಳೆಯರು ಕೊಡುವ ಡಬ್ಬಾ ಐಡಿಯಾಗಳು ಚಿತ್ರದ ಲವಲವಿಕೆಯನ್ನು ಕಾಯ್ದುಕೊಂಡಿವೆ. ಹಾಗೆಯೇ ಅಲ್ಲಲ್ಲಿ ಬರುವ ಹೊಡೆದಾಟಗಳು ಅಭಿಮಾನಿಗಳಿಗೆ ಹುಚ್ಚೆಬ್ಬಿಸುತ್ತವೆ. ಯಾವುದೇ ದ್ವಂದ್ವಾರ್ಥದ ಸಂಭಾಷಣೆಯಾಗಲಿ, ದೃಶ್ಯಗಳಾಗಲಿ ಇಲ್ಲದ ಬುಲ್ ಬುಲ್ ಒಂದು ಸಂಪೂರ್ಣ ಕೌಟುಂಬಿಕ ಚಿತ್ರವಾಗಿದ್ದರೂ ಮಾಸ್ ಆಡಿಯನ್ಸ್ ಗೆ ಬೇಕಾದ ಮಸಾಲೆಯನ್ನೂ ಹದವಾಗಿ ಹೊಂದಿರುವುದರಿಂದ ಪಕ್ಕಾ ಮನರಂಜನಾ ಚಿತ್ರ ಎನಿಸಿಕೊಳ್ಳುತ್ತದೆ.
ದರ್ಶನ್ ಲವರ್ ಬಾಯ್ ಆಗಿ ಅಪ್ಪ ಅಮ್ಮನ ಮುದ್ದಿನ ಮಗನಾಗಿ, ಕೇಡಿಗಳನ್ನು ಬಗ್ಗು ಬಡಿಯುವ ಒರಟನಾಗಿ ಲೀಲಾಜಾಲಿಯಾಗಿ ಅಭಿನಯಿಸಿದ್ದಾರೆ. ಹಾಗೆಯೇ ತೆರೆಯ ಮೇಲೆ ಚೆಂದಾಗಿ ಕಾಣಿಸುತ್ತಾರೆ. ದರ್ಶನ್ ತಂದೆಯ ಪಾತ್ರದಲ್ಲಿ ಅಂಬರೀಶ್ ಗಮನಸೆಳೆಯುತ್ತಾರೆ.ಚಿತ್ರದಲ್ಲಿ. ಅಶೋಕ್, ಸಿಹಿಕಹಿ ಚಂದ್ರು, ಟೆನಿಸ್ ಕೃಷ್ಣ, ಸಾಧುಕೋಕಿಲ, ರಮೇಶ್ ಭಟ್, ಚಿತ್ರಾಶೆಣೈ, ಶರಣ್, ರಮ್ಯಾ ಬಾರ್ನಾ, ಶರತ್ ಲೋಹಿತಾಶ್ವ...ಹೀಗೆ ಹಿರಿಕಿರಿಯ ನಟರ ದಂಡೇ ಇದ್ದು ಅದೇ ಚಿತ್ರಕ್ಕೊಂದು ಶ್ರೀಮಂತಿಕೆಯನ್ನು ತಂದುಕೊಟ್ಟಿದೆ. ಹಾಗೆಯೇ ಹರಿಕೃಷ್ಣರ ಸಂಗೀತ ಚಿತ್ರದ ಹೈಲೈಟ್ ಎನ್ನಬಹುದು. ಅವರ ಸಂಗೀತದಲ್ಲಿ ಮೂರು ಹಾಡುಗಳು ಗುನುಗುವಂತಿವೆ. ಕೃಷ್ಣ ಕುಮಾರ್ ಛಾಯಾಗ್ರಹಣ ಸೌಂದರ್ ರಾಜ್ ಸಂಕಲನ ಸಿನಿಮಾದ ಓಟಕ್ಕೆ ಸಹಾಯಕವಾಗಿವೆ. ಹಾಗೆ ಕವಿರಾಜ್  ಬರೆದಿರುವ ಸಂಭಾಷಣೆಗಳು ಅಲ್ಲಲ್ಲಿ ನಗೆಯುಕ್ಕಿಸುವಲ್ಲಿ ಯಶಸ್ವಿಯಾಗಿದೆ.ರೀಮೇಕ್ ಎನ್ನುವುದನ್ನು ಪಕ್ಕಕ್ಕಿಟ್ಟು ನೋಡಿದರೆ, ಶ್ರೀಮಂತವಾಗಿ ಚಿತ್ರಿತವಾಗಿರುವ ಬುಲ್ ಬುಲ್ ಚಿತ್ರ ಒಬ್ಬ ಸ್ಟಾರ್ ನಟನ ಸಿನಿಮಾ ಹೇಗಿರಬೇಕೋ, ಅಭಿಮಾನಿಗಳನ್ನು ತಣಿಸಲು ಯಾವ ಯಾವ ಅಂಶಗಳನ್ನು ಹೊಂದಿರಬೇಕೋ ಎಲ್ಲವನ್ನೂ ಹೊಂದಿದ್ದು, ಈ ವರ್ಷದ ಪಕ್ಕಾ ಎಂಟರ್ಟೈನರ್ ಆಗಿ ಹೊರಹೊಮ್ಮಿದೆ.

No comments:

Post a Comment