Pages

Sunday, November 10, 2013

ಸೈಕಲ್: ನೋಡೋದಕ್ಕೂ ಧಮ್ ಬೇಕು.



ಶಿವ ಹೆಸರೇ ಹೇಳುವಂತೆ ಹಿಂದೂ ಧರ್ಮದ ಹುಡುಗ.ಅವಳು ಸಾಹಿರಬಾನು, ಮುಸ್ಲಿಂ ಹುಡುಗಿ. ಈ ಇಬ್ಬರು ನಾಯಕ-ನಾಯಕಿಯರು ಎಂದಾಕ್ಷಣ ಚಿತ್ರದಲ್ಲಿ ಅವರೇನು ಮಾಡಬಹುದೆಂದು ನೀವು ಊಹಿಸಿರಬಹುದು. ಹೌದು . ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ.ಆದರೆ ಸ್ವಲ್ಪ ಟ್ವಿಸ್ಟ್ ಎಂದರೆ ನಾಯಕಿ ಬಾನು ಅವನನ್ನು ತಿರಸ್ಕರಿಸುತ್ತಾನೆ. ಆದರೆ ಶಿವ ಬಿಡಬೇಕಲ್ಲ..ಹಿಂದೆ ಬೀಳುತ್ತಾನೆ, ಕಾಡುತ್ತಾನೆ.ಕೊನೆಗೆ ಆಕೆಗೊಂದು ಪಪ್ಪಿ ಕೊಟ್ಟು ಹೆದರಿ ಬೆದರಿ ಊರುಬಿಡುತ್ತಾನೆ. ಬೆಂಗಳೂರಿಗೆ ಬಂದವನನ್ನು ಭೂಗತಲೋಕ ಕೈಬೀಸಿ ಕರೆಯುತ್ತದೆ. ಎಲ್ಲರನ್ನು ಬಹುತೇಕ ಚಿತ್ರಗಳ ನಾಯಕನನ್ನು ಕರೆವ ಹಾಗೆ. ಆ ನಂತರ ಲಾಂಗು ಬೀಸುತ್ತಾನೆ..ಕೊಲ್ಲುತ್ತಾನೆ. ಅಷ್ಟರಲ್ಲಿ ಮತ್ತೆ ಸಾಹಿರಾ ಬಾನು ಪ್ರವೇಶ.ಈಗ ನಾಯಕ ಮೊದಲು ಮಾಡಿದ್ದನ್ನೇ ತಾನು ಮಾಡಲು ತೊಡಗುತ್ತಾಳೆ. ಹಿಂದೆ ಬೀಳುತ್ತಾಳೆ. ಆದರೆ ನಾಯಕ ಶಿವ ಭೂಗತಲೋಕದ ಕಪಿಮುಷ್ಟಿಯಲ್ಲಿ,..ಮುಂದೆ ಬನ್ನಿ ಚಿತ್ರಮಂದಿರಕ್ಕೆ ಎನ್ನುತ್ತಾರೆ ನಿರ್ದೇಶಕ ಶಿವಾರ್ಜುನ್.
ಶಿವಾರ್ಜುನ್ ಇಲ್ಲಿ ಸಕಲ ಕಲಾವಲ್ಲಭರಾಗಿದ್ದಾರೆ. ಅದು ಪ್ರತಿಭಾ ಪ್ರದರ್ಶನವೋ..ಹಣದುಳಿತಾಯವೋ. ಒಟ್ಟಿನಲ್ಲಿ ತೆರೆಯ ಮೇಲೆ ಯಾವೊಂದು ವಿಷಯವೂ ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಅದೇ ಚಿತ್ರದ ಮೊದಲ ಮೈನಸ್ ಪಾಯಿಂಟ್.ಕಥೆ ಚಿತ್ರಕಥೆ ಸಂಭಾಷಣೆ ಎಲ್ಲವೂ ಅವರದೇ. ಕಥೆಯಲ್ಲಿ ಏನೋ ಇದೆ ಎನಿಸಿದರೂ ಚಿತ್ರಕಥೆ ಮಾತ್ರ ಆಯಾಸದಾಯಕ. ಚಿತ್ರದ ನಿರೂಪಣೆಯೂ ತೆವಳುತ್ತದೆ. ಆದರೆ ಬಿಲ್ಡ್ ಅಪ್ ಶಾಟ್ಗಳು ಹೇರಳವಾಗಿವೆ. ಅವೇ ಚಿತ್ರಕ್ಕೊಂದು ರೀತಿಯಲ್ಲಿ ಮುಳುವಾಗಿವೆ ಎನ್ನಬಹುದು.ಚಿತ್ರದ ನಿರೂಪಣೆಯನ್ನು ಹಸಿಹಸಿಯಾಗಿ ನಿರೂಪಿಸಲು ನಿರ್ದೇಶಕರು ವ್ಯರ್ಥ ಶ್ರಮ ಪಟ್ಟಿದ್ದಾರೆ. ಹಾಗೆಯೇ ಒಂದು ಭೂಗತಲೋಕದ, ರೌಡಿಸಂ ಪ್ರಪಂಚದ ಹಿನ್ನೆಲೆಗಳನ್ನು ಆಳವಾಗಿ ಅದ್ಯಯನ ಮಾಡದೆ ಸಿನಿಮೀಯ ರೀತಿಯಲ್ಲಿ ಚಿತ್ರಿಸಿರುವುದರಿಂದ ದೃಶ್ಯಗಳಲ್ಲಿ ಕೃತಕತೆ ಎದ್ದು ಕಾಣುತ್ತದೆ.
ಅಭಿನಯದ ವಿಷಯಕ್ಕೆ ಬಂದರೆ ಶಿವಾರ್ಜುನ್ ತೀರಾ ಸಾದಾರಣ ಎನ್ನಬಹುದು. ಅವರ ಕ್ರಿಯೆ ಪ್ರತಿಕ್ರಿಯೆ, ಭಾವನೆಗಳನ್ನು ವ್ಯಕ್ತ ಪಡಿಸುವ ರೀತಿ ..ಸಂಭಾಷಣೆ ಒಪ್ಪಿಸುವ ಪರಿ ಹೀಗೆ ಎಲ್ಲದರಲ್ಲೂ ಸೋತಿದ್ದಾರೆ. ಮತ್ತು ಅಷ್ಟನ್ನೂ ಬಲವಂತವಾಗಿ ಮಾಡಿದಂತೆ ಕಂಡುಬಂದರೆ ಅದಕ್ಕೆ ಶಿವಾರ್ಜುನ್ ರವರೆ ನೇರ ಹೊಣೆಗಾರರು.ಹೊಡೆದಾಟದ ದೃಶ್ಯಗಳಲ್ಲೂ ಶಿವಾರ್ಜುನ್ ತಮ್ಮ ಧಮ್ ತೋರಿಸಿಲ್ಲ.
ನಾಯಕಿ ಹರ್ಷಿಕಾ ಪೂಣಚ್ಚ ಕಾಲೇಜು ಹುಡುಗಿಯ ಅಭಿನಯದಲ್ಲಿ ಪರವಾಗಿಲ್ಲ ಎನ್ನಿಸುವ ರೀತಿಯಲ್ಲಿ ಅಭಿನಯಿಸಿದ್ದಾರೆ.ಸಂಗೀತದ ಬಗ್ಗೆ ಏನೂ ಬರೆಯದಿರುವುದೇ ಒಳಿತು. ಇನ್ನು ಹಿನ್ನೆಲೆ ಸಂಗೀತದ ಚಿತ್ರದ ಭಾವಕ್ಕೆ ಜೊತೆಯಾಗದೆ ಚಿತ್ರದ ಭಾವವನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ಸೋತಿದೆ. ಇನ್ನುಳಿದಂತೆ ತಾಂತ್ರಿಕ ಅಂಶಗಳೇನೂ ಗಮನ ಸೆಳೆಯುವ ಹಾಗಿಲ್ಲ.
ಶಿವಾರ್ಜುನ್, ಹರ್ಷಿಕಾ ಪೂಣಚ್ಚ, ಅನಂತವೇಲು, ಕಿಮ್ಸ್ ರಾಜು,ಸೋನಿಯಾ ಗೌಡ, ಜಯಬಾಲು ಮೊನಿಷಾ ಮುಂತಾದವರು ತಾರಾಗಣದಲ್ಲಿರುವ ಚಿತ್ರದ ಛಾಯಾಗ್ರಹಣ ಸಿನಿ ಟೆಕ್ ಸೂರಿಯವರದು.
ಕೊನೆಯ ಮಾತು: ಎಲ್ಲವನ್ನೂ ಮಾಡುತ್ತೇನೆಂದು ಹೊರಟಿರುವ ಶಿವಾರ್ಜುನ್ ಸೋತಿರುವುದು ಅಲ್ಲೇ. ಇರುವ ಕಥೆಯನ್ನೇ ಚಿತ್ರಕಥೆಯ ಮೂಲಕ ಸಶಕ್ತಗೊಳಿಸುವ ಎಲ್ಲಾ ಸಾಧ್ಯತೆಗಳಿದ್ದವು. ಇಲ್ಲಿ ಅದಾಗಿಲ್ಲದೆ ಇರುವುದರಿಂದ ಸುಮ್ಮನೆ ಲೆಕ್ಕಕ್ಕೆ ಬಿದುಗದೆಯಾಗುವ ಚಿತ್ರಗಳ ಪಟ್ಟಿಗೆ ಸೈಕಲ್ ಸೇರಿಕೊಂಡಿದೆ. ಇಂತಹ  ಯಾರಿಗಾದರೂ ಆಗುವ ಲಾಭವಾದರೂ ಏನು..? ಚಿತ್ರಕರ್ಮಿಗಳು ಈ ಪ್ರಶ್ನೆಯನ್ನು ಮನಸ್ಸಲ್ಲಿಟ್ಟು ಕೊಂಡು ಚಿತ್ರ ತಯಾರಿಸಿದರೆ ಒಳ್ಳೆಯದು..ಅಲ್ಲವೇ?

No comments:

Post a Comment