Pages

Sunday, November 10, 2013

ಟೋನಿ' ನೋಡಲೆ ಬೇಕಾದ ಚಿತ್ರ.

ಅತಿ ಆಸೆ ಗತಿ ಕೇಡು, ಆಸೆಯೆ ದುಖಃಕ್ಕೆ ಮೂಲ ಹೀಗೆ ಅತಿ ಆಸೆ ಪಡೋದು ತಪ್ಪು ಎಂದು ಸಂದೇಶ ಸಾರುವ ಗಾದೆ ಅಥವಾ ನುಡಿಗಟ್ಟುಗಳು ಬೇಕಾದಷ್ಟು ನಮ್ಮ ಮುಂದಿದ್ದರು ಕೂಡ, ನಾವು ಅವುಗಳನ್ನು ಓದಿ ಮರೆಯುತ್ತ, ಆಸೆಗಳನ ಹೊತ್ತು ಸಾಗುತ್ತಲೇ ಇರುತ್ತೀವಿ.  ನಮ್ಮ ಆಸೆಗಳ ಭಾರ ಎಷ್ಟಿರುತ್ತೆಂದರೆ ಹೊರಲಾರದಷ್ಟು. ಆದರೂ ಕಷ್ಟ ಪಟ್ಟು ಹೊತ್ತು ಸಾಗುತ್ತಲೇ ಜೀವನದ ಹಲವು ಸಂತೋಷಗಳನ್ನು ಕಳೆದುಕೊಳ್ಳುತ್ತೇವೆ.
ನಿರ್ದೇಶಕ ಜಯತೀರ್ಥ ಟೋನಿ ಚಿತ್ರದಲ್ಲಿ ಹೇಳ ಹೊರಟಿರುವುದು ಈ ಮೇಲಿನ ಅಂಶಗಳನ್ನೆ. ಹಾಗಂತ ಅದು ಎಲ್ಲೂ ಕೂಡ ಭೋಧನೆ ಅನಿಸೋದಿಲ್ಲ. ಅಷ್ಟರ ಮಟ್ಟಿಗೆ ನಿರ್ದೇಶಕರು ಚಿತ್ರಕಥೆಯನ್ನು ಹೆಣೆದಿದ್ದಾರೆ. ಚಿತ್ರದಲ್ಲೊಂದು ಸಂದೇಶವಿದೆ ಎನ್ನೋದಕಿಂತ ಇಡೀ ಚಿತ್ರವೇ ಒಂದು ತಾತ್ವೀಕ ನೆಲೆಗಟ್ಟಿನಲ್ಲಿ ಸಾಗುತ್ತದೆ.
ಇಲ್ಲಿ ಸಾಕು ಮತ್ತು ಬೇಕುಗಳ ನಡುವಿನ ಅಂತರವನ್ನು ಮನದಟ್ಟು ಮಾಡಲು  ನಿರ್ದೇಶಕರು ನಾಲ್ಕು ಕಥೆಗಳನ್ನು ಹೇಳುತ್ತಾ ಹೋಗುತ್ತಾರೆ. ಎರಡು ಕಥೆಗಳು ಬೇಕುಗಳ ಬಗ್ಗೆ ಇದ್ದು, ಬೇಕುಗಳು ಹೆಚ್ಚಾದಾಗ ಹೇಗೆ ಸುಖಃ ಸಂತೋಷ ನಮ್ಮಿಂದ ದೂರಾಗುತ್ತದೆ ಎಂಬುದರ ಅರಿವು ಮೂಡಿಸಿದರೆ,ಇನ್ನೆರಡು ಕಥೆಗಳು ಸಾಕು ಎಂದು ಸಂತೃಪ್ತಿಯ ಜೀವನ ನಡೆಸುತ್ತಿರುವವರ ಬಗ್ಗೆ ಇದೆ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬೇಕುಗಳ ಹಿಂದೆ ಬಿದ್ದವರು ಯುವಜನತೆಯ ಪ್ರತೀಕದಂತೆ ಕಂಡರೆ, ಸಾಕು ಎಂದು ಸಂತೃಪ್ತಿಯ ಜೀವನ ಸಾಗಿಸುವವರು, ಹಿರಿಯರು ಅನುಭವಸ್ಥರ ಪ್ರತೀಕದಂತೆ ಕಾಣುತ್ತಾರೆ.ಇಷ್ಟೆಲ್ಲಾ ಹೇಳಿದ ಮೇಲೆ ಚಿತ್ರದ ಕಥೆಯ ಬಗ್ಗೆ ಇನ್ನಷ್ಟು ಚರ್ಚೆ ಬೇಡ?
ನಿರ್ದೇಶಕ ಜಯತೀರ್ಥ ನಿರೂಪಣೆಯಲ್ಲಿ ತಮ್ಮದೆ ಆದ ಹೊಸ ಶೈಲಿಯನ್ನು ಬಳಸಿದ್ದಾರೆ. ಇದೊಂದು ಸಂದೇಶ ಸಾರುವ ವಸ್ತುವನ್ನೊಳ ಗೊಂಡಿದ್ದರೂ ಕೂಡ ಅದು ತೆರೆಯ ಮೇಲೆ ದೃಶ್ಯರೂಪದಲ್ಲಿ ಕಂಡಾಗ ಪ್ರತಿ ಕ್ಷಣವು ಕುತೂಹಲ ಹುಟ್ಟಿಸುತ್ತ ಸಾಗುತ್ತದೆ. ಚಿತ್ರ ಶುರುವಾದಗಿನಿಂದ ಅಂತ್ಯದವರೆಗೂ ಪ್ರೇಕ್ಷಕ ಉಸಿರು ಬಿಗಿಹಿಡಿದು ಸೀಟಿನ ತುದಿಯಲ್ಲಿ ಕೂತು ನೋಡುತ್ತಿರುತ್ತಾನೆ.
ಚಿತ್ರದಲ್ಲಿ ಅಷ್ಟಾಗಿ ಸಾಹಸ ದೃಶ್ಯಗಳು ಇಲ್ಲದಿದ್ದರೂ ಕೂಡ ಒಂದು ರೀತಿಯ ಪೋರ್ಸ್ ಇದೆ.
ಅದರಲ್ಲೂ ನಾಯಕ ಬಂದೂಕು ಹಿಡಿದು ಯಾರನ್ನೋ ಕೊಲ್ಲಲು ಹಿಂಜರಿಯುವ ದೃಶ್ಯವಂತೂ ರೋಚಕತೆಯಿಂದ ಕೂಡಿದೆ. ನಟನೆ ವಿಷಯಕ್ಕೆ ಬಂದರೆ ಟೋನಿಯಾಗಿ ಶ್ರೀ ನಗರ ಕಿಟ್ಟಿ ಮಿಂಚಿದ್ದಾರೆ. ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಹಾಗೆ ಗ್ಲಾಮರ್ ಗೊಂಬೆ ಅಂದ್ರಿತಾ ರೇ ಈ ಚಿತ್ರದಲ್ಲಿ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
 ಸಾಧು ಕೋಕಿಲ ಸಂಗೀತ ಸಂಯೋಜನೆಯ 3 ಹಾಡುಗಳು ಅಧ್ಬುತವಾಗಿವೆ ಹಾಗೂ ಚಿತ್ರದಲ್ಲಿನ
ಹಿನ್ನೆಲೆ ಸಂಗೀತ ಮೋಡಿ ಮಾಡುತ್ತದೆ. ಇನ್ನೂ ಸುಜ್ಞಾನ್ ತಮ್ಮ ಛಾಯಗ್ರಹಣದ ಮೂಲಕ ಗಮನ ಸೆಳೆದರೆ, ದೃಶ್ಯಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡುವಲ್ಲಿ ಸಂಕಲನಕಾರ ಕೆ.ಎಂ.ಪ್ರಕಾಶ್ ವಹಿಸಿರುವ ಶ್ರಮ ಎಷ್ಟೆಂದು ಚಿತ್ರನೋಡಿದವರಿಗೆ ಗೊತ್ತಾಗುತ್ತೆ.
ಹಾಗಂತ ಇಡೀ ಚಿತ್ರದಲ್ಲಿ ತಪ್ಪುಗಳೆ ಇಲ್ಲ ಎನ್ನಲಾಗದು, ಚಿತ್ರದ ಓಟಕ್ಕೆ ಅಲ್ಲಲ್ಲಿ ಹಾಡುಗಳು ಧಕ್ಕೆ ತಂದವೇನೋ ಅನಿಸುತ್ತೆ ಅದರಲ್ಲೂ ಕ್ಲೈಮ್ಯಾಕ್ಸ್ ಹಂತದಲ್ಲಿ ಬರುವ ಒಂದು ಹಾಡು ಬೇಕಿತ್ತಾ ಎಂಬ ಪ್ರಶ್ನೆ ಮೂಡಿಸುತ್ತೆ.  ಹಾಗೆ ಕ್ಲೈಮ್ಯಾಕ್ಸ್ ಇನ್ನಷ್ಟು ಪರಿಣಾಮಕಾರಿಯಾಗಿರ ಬೇಕಿತ್ತೆನೊ ಅನಿಸದೆ ಇರದು.

No comments:

Post a Comment