Pages

Sunday, November 10, 2013

ಸಿಲ್ಕ್ ಸಖತ್ ಹಾಟ್ ಮಗಾ..

ಸಿಲ್ಕ್ ಸಖತ್ ಹಾಟ್ ಮಗಾ ಎಂಬ ಹಸಿಬಿಸಿ ಚಿತ್ರಡ ಶೀರ್ಷಿಕೆ ಕೇಳಿದರೆ ಚಿತ್ರದೊಳಗಿನ ಹೂರಣದ ಅಂದಾಜು ಚಿತ್ರರಸಿಕನಿಗೆ ಆಗದೆ ಇರದು. ಈಗಾಗಲೇ ಬಾಲಿವುಡ್ನಲ್ಲಿ ಡರ್ಟಿ ಪಿಕ್ಚರ್ ಎಂಬ ಸಿನಿಮಾ ಬಂದು ದುಡ್ಡು ಮಾಡಿದ್ದು ಆನಂತರ ಅದೇ ಹೆಸರನ್ನು ಕನ್ನಡದಲ್ಲೂ ಇಟ್ಟಿದ್ದು ಆಕ್ಷೇಪಣೆಗಳು ಬಂದಾಗ ವಿಧಿಯಿಲ್ಲದೇ ಹೆಸರು ಬದಲಾವಣೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ವೀಣಾ ಮಲಿಕ್ ಎಂಬ ಮಾದಕ ಪಾಕಿಸ್ತಾನಿ ಬೆಡಗಿಯನ್ನು ಕನ್ನಡಕ್ಕೆ ಮುಖ್ಯ ಪಾತ್ರಕ್ಕೆ ಕರೆತರುತ್ತಿದ್ದಾರೆ ಎಂಬ ಸುದ್ದಿ ಬಂದಾಗಲೇ ಎಲ್ಲರಿಗೂ ಚಿತ್ರದ ಕಥೆ ಏನಿರಬಹುದೆಂಬ ಕುತೂಹಲ ನಿರೀಕ್ಷೆ ಎಲ್ಲವೂ ಹೆಚ್ಚಾಗಿರುವ ಸಂಭವ ಇಲ್ಲದೆ ಇಲ್ಲ. ಅದೆಲ್ಲವನ್ನೂ ಮನಸಲ್ಲಿರಿಸಿಕೊಂಡು ಚಿತ್ರ ಮಂದಿರಕ್ಕೆ ಹೋದರೆ ನಮಗನ್ನಿಸುವುದು ನಿರ್ದೇಶಕರು ತಾವೇ ಅವೆಲ್ಲವನ್ನೂ ಮರೆತು ಬರೀ ಸಖತ್ ಹಾಟ್ ಮಗಾ ಎನ್ನುವ ಅಡಿಬರಹಕ್ಕೆ ನ್ಯಾಯ ಒದಗಿಸಲು ಈ ತರಹದ ಚಿತ್ರ ಮಾಡಿದ್ದಾರೆಯೇ ಎಂದು. ಹೌದು ಇಡೀ ಚಿತ್ರದಲ್ಲಿ ಎಗ್ಗು ಸಿಗ್ಗಿಲ್ಲದೆ ಕಾಣ ಸಿಗುವುದು ವೀಣಾ ಮಲಿಕ್ ಳ ಮೈಮಾಟ ಪ್ರದರ್ಶನ.
ಚಿತ್ರದ ಕಥೆಯ ಬಗ್ಗೆ ನಿರ್ದೇಶಕರು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಿಲ್ಲ. ಹಾಗೆಯೇ ಒಬ್ಬ ನಟಿ ಕುರಿತಾದ ಅದ್ಯಯನ ಅಭ್ಯಾಸ ಮುಂತಾದವುಗಳ ಬಗ್ಗೆ ಎಳ್ಳಿನ ಮೊನೆಯಷ್ಟೂ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಸುಮ್ಮನೆ ತಾವಂದುಕೊಂಡ ಕಥೆಯನ್ನು ಹೆಣೆದುಬಿಟ್ಟಿದ್ದಾರೆ. ಚಿತ್ರರಂಗದ ಹಿನ್ನೆಲೆಯ ಕಥೆಗೆ ಸೂಕ್ತವಾದ ಚಿತ್ರಕಥೆಯಾಗಲಿ, ದೃಶ್ಯ ಜೋಡನೆಯಾಗಲಿ ಕಾಣಸಿಗದು.ಹಾಗೆಯೇ ನಟಿಯಾಗ ಬೇಕೆಂಬಾಸೆಯ ಯುವತಿಯ ಕಥೆ ಇದಾದರೂ ನಾಯಕಿಯಲ್ಲಿನ ಒಳಗುದಿಯಾ ಸೂಕ್ಷ್ಮಗಳನ್ನು ತೆರೆದಿಡುವಲ್ಲಿ ನಿರ್ದೇಶಕರು ಸಂಪೂರ್ಣವಾಗಿ ಸೋತುಬಿಟ್ಟಿದ್ದಾರೆ.ಹಾಗಾಗಿಯೇ ಚಿತ್ರದಲ್ಲಿರುವ ಕರುಳುಹಿಂಡುವ ದೃಶ್ಯಗಳೂ, ಪ್ರೀತಿಯ ದೃಶ್ಯಗಳೂ ಆದರ್ಶಮಯ ದೃಶ್ಯಗಳೂ ಕಿಂಚಿತ್ತೂ ಪ್ರಭಾವ ಬೀರುವುದಿಲ್ಲ.ಚಿತ್ರದ ಕಥೆ ಇಂತಿದೆ. ಚಿತ್ರದ ನಾಯಕ ರೌಡಿ. ನಾಯಕಿ ವಿಜಯಲಕ್ಷ್ಮಿ. ಕಲಾವಿದೆಯಾಗಬೇಕು, ಚಲನಚಿತ್ರಗಲ್ಲಿ ನಟಿಸಬೇಕು ಎನ್ನುವ ಆಸೆ ಆಕೆಯದು.ಹಳ್ಳಿಯಲ್ಲಿದ್ದು ಕೊಂಡು ದೊಡ್ಡ ಕನಸು ಕಾಣುವ ಹುಡುಗಿ ವಿಜಯಲಕ್ಷ್ಮಿಗೆ ಅವನೊಬ್ಬ ಪರಿಚಯವಾಗಿ ತನಗೆಲ್ಲಾ ಗೊತ್ತಿದೆ ಎಂದು ಹೇಳುತ್ತಾನೆ. ಸರಿ ನಾಯಕಿ ನಂಬುತ್ತಾಳೆ. ಅವನ ನಂಬಿ ಹಿಂದೆ ಹೊರಟರೆ ಆತ ಮೋಸ ಮಾಡುತ್ತಾನೆ.ವಿಜಯ ಲಕ್ಷ್ಮಿ ನೇರವಾಗಿ ವೇಶ್ಯಾಗೃಹಕ್ಕೆ ಬಂದು ಬೀಳುತ್ತಾಳೆ. ಅನಂತರ ನಾಯಕ ಶಿವರಾಜ್ ಮತ್ತು ವಿಜಯಲಕ್ಷ್ಮಿ ಭೇಟಿಯಾಗಿ ಗೆಳೆಯರಾಗಿ ಪ್ರೀತಿಸಿ ಮದುವೆಯಾಗುತ್ತಾರೆ. ಮುಂದೆ..? ಇಷ್ಟನ್ನು ಹೇಳಿದ ಮೇಲೆ ಮುಂದಿನದ್ದನ್ನು ಚಿತ್ರ ಮಂದಿರದಲ್ಲಿ ನೋಡಿ ತಿಳಿದುಕೊಳ್ಳಿ ಎಂಬುದು ನಮ್ಮ ಕೋರಿಕೆ.
ನಾಯಕಿ ವೀಣಾ ಮಲಿಕ್ ರದು ಅಭಿನಯವೋ ಏನೋ ಎಂಬುದು ಕೊನೆಯವರೆಗೂ ಗೊತ್ತಾಗುವುದಿಲ್ಲ. ಕೆಲವೊಂದು ಕೋನದಲ್ಲಿ ಚೆನ್ನಾಗಿ ಕಾಣಿಸುವ ವೀಣಾ ಮಲಿಕ್ ಅಳುವ ದೃಶ್ಯಗಳಲ್ಲಿ ಪೇಲವವಾಗಿ ಅಭಿನಯಿಸಿದ್ದಾರೆ. ಆದರೆ ಶೃಂಗಾರಮಯ ದೃಶ್ಯದಲ್ಲಿ ವೀಕ್ಷಕರೆ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ತನ್ಮಯರಾಗಿ ಅಭಿನಯಿಸಿದ್ದಾರೆ.ಅವರ ಮೈಮಾಟ ಪ್ರದರ್ಶನ, ಚುಂಬನದ ದೃಶ್ಯಗಳು, ಹಾಡಿನಲ್ಲಿನ ಸೊಂಟ ಕುಣಿಸುವ ಪರಿಗೆ ಪಡ್ಡೆಗಳು ಹುಚ್ಚೆದ್ದು ಹೋಗುತ್ತಾರೆ.ರೋಮಾಂಚಿತರಾಗುತ್ತಾರೆ. ಆದರೆ ಭಾವಾನಾತ್ಮಕ ದೃಶ್ಯಗಳಲ್ಲಿ ಇದೆ ಮಾತನ್ನು ಹೇಳುವ ಹಾಗಿಲ್ಲ. ನಾಯಕ ಅಕ್ಷಯ್ ತಮ್ಮ ಹಿಂದಿನ ಚಿತ್ರಗಳಿಗಿಂತ ಸುಧಾರಿಸಿದ್ದಾರೆ. ಈ ಚಿತ್ರದಲ್ಲಿ ಹೊಡೆದಾಟದ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ಆದರೆ ಸಂಭಾಷಣೆ ಒಪ್ಪಿಸುವ ಪರಿಯಲ್ಲಿ ಇನ್ನೂ ಪಳಗಬೇಕು.ಇನ್ನುಳಿದ ತಾರಾಗಣ ಚೆನ್ನಾಗಿದೆ. ಛಾಯಾಗ್ರಹಣ ಮತ್ತು ಸಂಗೀತ ಸಾದಾರಣ ಎನ್ನಬಹುದು.ನಿರ್ದೇಶಕ ತ್ರಿಶೂಲ್ ಇನ್ನೂ ಗಟ್ಟಿ ಕಥೆಯತ್ತ ಗಮನ ಹರಿಸಿದ್ದರೆ ಸಿಲ್ಕ್ ಒಂದು ಉತ್ತಮ ಚಿತ್ರವಾಗುತ್ತಿತ್ತೇನೋ...?

No comments:

Post a Comment