Pages

Sunday, November 10, 2013

ಗರ್ಭದ ಗುಡಿ:



ಚಿತ್ರದ ನಿರ್ದೇಶಕರು ಸಾಯಿಪ್ರಕಾಶ್ ಆದ್ದರಿಂದ ಕರವಸ್ತ್ರವನ್ನು ಕೈಯಲ್ಲಿ ಹಿಡಿದು ಚಿತ್ರಮಂದಿರದ ಒಳಗೆ ಹೋಗಬೇಕಾ ಎಂಬ ಪ್ರಶ್ನೆ ಕನ್ನಡ ಪ್ರೇಕ್ಷಕರನ್ನು ಕಾಡದಿರದು. ಅದಕ್ಕೆ ಉತ್ತರ ಹೌದು ಎಂದೆ.
ಚಿತ್ರದ ಹೆಸರೇ ಹೇಳುವಂತೆ ಇಡೀ ಚಿತ್ರ ಗರ್ಭಾಶಯದ ಸುತ್ತ ಸುತ್ತುತ್ತದೆ ಎಂದರೆ ಇದೇನು ವೈದ್ಯಕೀಯ ಸಾಕ್ಷ್ಯ ಚಿತ್ರವೇ ಎಂದು ಓದುಗರು ತಪ್ಪಾರ್ಥ ಮಾಡಿಕೊಳ್ಳಬಾರದು. ಇಡೀ ಚಿತ್ರದಲ್ಲಿ ಒಂದೆ ವಸ್ತು. ಅದು ಹೆಣ್ಣು ಭ್ರೂಣ ಹತ್ಯೆ. ಹೆಣ್ಣೆಂದರೆ ಸಂಕಟ,ನೋವು ಖರ್ಚು ಎಂಬ ನಂಬಿಕೆ ತಲಾತಲಾಂತರಗಳಿಂದ ನಮ್ಮಲಿದೆ. ಗಂಡು ಮಗುವಾದರೆ ನಮ್ಮನ್ನು ಕೊನೆಗಾಲದಲ್ಲಿ ಸಾಕುತ್ತಾನೆ, ಹೆಣ್ಣಾದರೆ ಹುಟ್ಟಿ ಬೆಳೆದು ನಮ್ಮಿಂದ ಖರ್ಚು ಮಾಡಿಸಿ ಬೇರೊಬ್ಬನ ಮನೆಯನ್ನು ಬೆಳಗಲು ಹೋಗಿಬಿಡುತ್ತಾಳೆ ಎಂದು ಬಲವಾಗಿ ನಂಬಿರುವ ದಂಪತಿಗಳಿಗೆ ದುರಾದೃಷ್ಟ ಎಂಬಂತೆ ಹೆಣ್ಣು ಮಗುವಾಗಿ ಬಿಡುತ್ತದೆ. ಹಿಂದೆ ಮುಂದೆ ಯೋಚಿಸದೆ ಆ ಹೆಣ್ಣನ್ನು ಎಲ್ಲಾ ರೀತಿಯಿಂದಲೂ ನಿರ್ಲ್ಯಕ್ಷ ಮಾಡುತ್ತಾರೆ ಪೋಷಕರು. ಆದರೆ ತಮ್ಮ ಮಗನನ್ನು ಮುದ್ದಾಗಿ ಬೆಳೆಸುತ್ತಾರೆ. ಆದರೆ ಮುದ್ದುಮುದ್ದಾಗಿ ಬೆಳೆದ ಆ ವಂಶೋದ್ಧಾರಕ ತಂದೆತಾಯಿಗೆ ಕೊಡಬಾರದ ಕಷ್ಟ ಕೊಟ್ಟು ಮನೆಯಿಂದ ಹೊರಹಾಕುತ್ತಾನೆ. ಆಗ ಮಗಳು ಕೈ ಬಿಡುವುದಿಲ್ಲ. ಆಸರೆಯಾಗುತ್ತಾಳೆ, ಸಲಹುತ್ತಾಳೆ.
ಇದರ ಜೊತೆಗೆ ಇನ್ನೂ ಹಲವಾರು ಉಪಕಥೆಗಳು ಬಂದುಹೋಗುತ್ತವೆ. ಉಪಕಥೆಗಳು ಎನ್ನುವುದಕ್ಕಿಂತ ಘಟನೆಗಳು ಎಂದರೆ ಸೂಕ್ತವೇನೋ..? ಹಿಂಸೆ ಕೊಡುವ ಗಂಡ, ಹಿಂಸೆ ಕೊಡುವ ಅತ್ತೆ..ಹೀಗೆ ಹೆಣ್ಣಿಗೆ ಯಾವ್ಯಾವ ಮೂಲೆಯಿಂದ ಶೋಷಣೆಯಾಗುತ್ತದೋ ಹೆಚ್ಚು ಕಡಿಮೆ ಆ ಎಲ್ಲಾ ನಿದರ್ಶನವನ್ನು ಸಾಯಿಪ್ರಕಾಶ್ ಗರ್ಭಗುಡಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿತ್ರ ಪ್ರಾರಂಭದಿಂದ ಅಂತ್ಯದವೆರೆಗೂ ಹೆಣ್ಣಿನ ಸುತ್ತವೇ ಸುತ್ತುತ್ತದೆ. ಕೆಲವೊಂದು ಕಡೆ ಸಾಕ್ಷ್ಯ ಕಥಾ ಚಿತ್ರದಂತೆ ಭಾಸವಾಗುತ್ತದೆ ಎಂದರೆ ನಿರ್ದೇಶಕರು ಬೇಸರಿಸಿಕೊಳ್ಳಬಾರದು.
ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂಬ ಮಾತು ಸವಕಲಿಯಾಗಿದೆ ಎನ್ನಬಹುದಾದರೂ ನಿರ್ದೇಶಕರು ಅದನ್ನೇ ನವನಾವೀಣ್ಯ ವಿಷಯವೆಂಬಂತೆ ಚಿತ್ರದ ಕಥೆಯಲ್ಲಿ ತುಂಬಿದ್ದಾರೆ.
ಚಿತ್ರ ತಾಂತ್ರಿಕವಾಗಿ ನರಳಿದೆ. ಛಾಯಾಗ್ರಹಣ, ನಿರ್ಮಾಣ ಶೈಲಿಯಲ್ಲಿನ ಬಡತನ ತೆರೆಯ ಮೇಲೆ ಕಣ್ಣಿಗೆ ರಾಚುವಂತೆ ಕಾಣುತ್ತದೆ. ಜೊತೆಗೆ ನಿರ್ದೇಶನವೂ ಜಾಳು ಜಾಳಾಗಿರುವುದರಿಂದ ನಟಿಸಿದ್ದೆಲ್ಲವನ್ನೂ ನಿರ್ದೇಶಕರು ಓಕೆ ಮಾಡಿದ್ದಾರಾ..ಚಿತ್ರೀಕರಿಸಿದ್ದೆಲ್ಲವನ್ನೂ ಸಂಕಲನದಲ್ಲಿ ಉಳಿಸಿಕೊಂಡಿದ್ದಾರಾ ಎಂಬ ಅನುಮಾನ ಕಾಡುತ್ತದೆ. ಮೊದಲಾರ್ಧದ ಚಿತ್ರಕಥೆಯಂತೂ ಎಲ್ಲೆಲ್ಲೋ ಸಾಗುತ್ತದೆ. ದ್ವಿತೀಯ ಭಾಗದಲ್ಲಿ ಸ್ವಲ್ಪ ಸಹನೀಯ ಅನಿಸಿದರೂ ಸೆಂಟಿಮೆಂಟ್ ದೃಶ್ಯಗಳು ಅತಿಯಾಯಿತೇನೋ ಎನಿಸುತ್ತವೆ,
ಅನುಪ್ರಭಾಕರ್, ರಮೇಶ್ ಭಟ್, ಪದ್ಮಜಾರಾವ್, ಟೆನಿಸ್ ಕೃಷ್ಣ, ಉಮೇಶ್ ಸಿಹಿಕಹಿ ಚಂದ್ರು, ಪದ್ಮಾವಾಸಂತಿ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ. ಹಾಡುಗಳು, ಸಾಹಿತ್ಯ ಸಂಗೀತ ಯಾವುದೂ ನೆನಪಲ್ಲಿ ಉಳಿಯುವುದಿಲ್ಲ. ನಾರಾಯಣ್ ರವರ ಕ್ಯಾಮೆರಾ ಕೆಲಸಕ್ಕೂ ಇದೆ ಮಾತು ಅನ್ವಯವಾಗುತ್ತದೆ.
ಸಾಮಾಜಿಕ ಕಳಕಳಿಯ ಚಿತ್ರಗಳು ಯಾವತ್ತೂ ಸಮಾಜಾಭಿಮುಖವಾಗಿ ಪ್ರೇಕ್ಷಕರ ಮುಂದಿರಬೇಕು. ಹಾಗಾದಾಗ ಆ ಸಂದೇಶಕ್ಕೆ ನ್ಯಾಯ ಸಿಗುತ್ತದೆ. ಪ್ರಶಸ್ತಿ ಅದೂ ಇದೂ ಮುಂತಾದವುಗಳಿಗಾಗಿ ಚಿತ್ರ ನಿರ್ಮಿಸಿ ಅದು ಇಂತಹದ್ದೇ ಚಿತ್ರ ಎಂದು ಬ್ರಾಂಡ್ ಮಾಡಿಬಿಟ್ಟಾಗ ಪ್ರೇಕ್ಷಕರನ್ನು ನಾವು ಮಿತಿಗೊಳಿಸಿದಂತಾಗುತ್ತದೆ. ಈ ಚಿತ್ರವೂ ಅಂತಹ ಚಿತ್ರಗಳ ಸಾಲಿಗೆ ಸೇರುತ್ತದೆ.

No comments:

Post a Comment