Pages

Sunday, November 10, 2013

ದಾಸವಾಳ

ಅಕಸ್ಮಾತ್ ಸಿನೆಮಾ ಇಷ್ಟವಾಗದಿದ್ದರೆ ಇದೇನು ಸ್ವಾಮೀ , ಹೀಗೆ ಮಾಡಿಬಿಟ್ರು ಎಂದು ಪ್ರೇಕ್ಷಕರು ದೂಷಿಸುವ ಹಾಗಿಲ್ಲ. ಯಾಕೆಂದರೆ ಚಿತ್ರದ ಹೆಸರೇ ದಾಸವಾಳ. ಹೆಸರಿನಂತೆ ಕಿವಿಗಿಟ್ಟಿದ್ದೀವಿ ಸುಮ್ನೆ ಹೋಗಪ್ಪ ಎಂದು ಚಿತ್ರತಂಡ ತಮ್ಮ ಶೀರ್ಷಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡು ಬಿಡಬಹುದು.ದಾಸವಾಳ ಒಂದು ಹಾಸ್ಯಮಯ ಚಿತ್ರ ಎನ್ನುವ ಹಣೆಪಟ್ಟಿ ಹೊತ್ತುಕೊಂಡು ಬಂದಿರುವ ಚಿತ್ರ.ಆದರೆ ಚಿತ್ರದಲ್ಲಿನ ದೃಶ್ಯಗಳು ನಗೆ ತರಿಸುವುದಕ್ಕೆ ಪ್ರಯಾಸ ಪಡುತ್ತವೆ.ಮೊದಲಾರ್ಧದ ಜಾಳು ಜಾಳು ನಿರೂಪಣೆ ಆಕಳಿಕೆ ತರಿಸುತ್ತದೆ.ಚಿತ್ರದ ದ್ವೀತಿಯಾರ್ಧದವರೆಗೆ ಹೇಗೋ ಸಿನಿಮಾವನ್ನು ದೂಡಿಕೊಂಡು ಹೋದರೆ ಸಾಕಪ್ಪ ಎನ್ನುವ ಮನೋಭಾವದಲ್ಲಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆಯೇ ಎಂಬ ಅನುಮಾನ ಕಾಡುವುದಕ್ಕೆ ಎಂ. ಎಸ. ರಮೇಶ್ ರವರ ಚಿತ್ರಕಥೆ ಕಾರಣವಾಗುತ್ತದೆ. ಚಿತ್ರದಲ್ಲಿ ಎರಡು ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಮತ್ತು ನಿರ್ದೇಶಕ ಪ್ರೇಮ್ ಅಭಿನಯಿಸಿದ್ದಾರೆ. ಮೇಲುಕೋಟೆ ಪ್ರವಾಸಿ ತಾಣದಲ್ಲಿ ಪ್ರವಾಸಿಗರಿಗೆ ಗೈಡ್ ಮತ್ತು ಫೋಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುವ ಈ ಇಬ್ಬರು ಮೊದಲಾರ್ಧದ ವರೆಗೆ ಹೇಗೋ ಚಿತ್ರವನ್ನು ಸಂಭಾಳಿಸುವ ಪ್ರಯತ್ನ ಪಡುತ್ತಾರೆ. ಅಲ್ಲಲ್ಲಿ ದ್ವಂದ್ವಾರ್ಥದ ಸಂಭಾಷಣೆ ನಗೆಯುಕ್ಕಿಸಿದರೆ ಕೆಲವು ಕಡೆ ಸಭ್ಯತೆಯ ಎಲ್ಲೆಯನ್ನು ಸ್ವಲ್ಪ ಮೀರಿದೆ ಎನಿಸುತ್ತದೆ.
ಚಿತ್ರದ ಕಥೆಯಲ್ಲಿ ವಿಶೇಷವಿಲ್ಲ. ಸಂಬಂಧಗಳ ಅರಿವಿಲ್ಲದವರು  ಒಂದಷ್ಟು ಅಪರಿಚಿತರನ್ನು ಮನೆಯಲ್ಲಿಟ್ಟುಕೊಂದು ಸಂಬಂಧದ ಮಹತ್ವವನ್ನು ಅರಿವು ಮಾಡಿಕೊಳ್ಳುವ ಕಥೆ. ಹೌದು! ನಿಮಗೇನಾದರೂ ನಿರ್ದೇಶಕ ಗುರುಪ್ರಸಾದ್ ರ ಡೈರೆಕ್ಟರ್ ಸ್ಪೆಷಲ್ ಚಿತ್ರದ ನೆನಪಾದರೆ ಅದಕ್ಕೆ ಹೊಣೆ ನೀವೇ. ಹೆಚ್ಚು ಕಡಿಮೆ ಅದೇ ಕಥೆಯನ್ನು ಬೇರೆ ರೀತಿಯಲ್ಲಿ ಹೇಳಲು ನಿರ್ದೇಶಕ ರಮೇಶ್ ಪ್ರಯತ್ನಿಸಿದ್ದಾರೆ. ಚಿತ್ರದ ಹಾಡುಗಳಲ್ಲಿ ಸತ್ವವಿಲ್ಲ. ಗುರುಕಿರಣ್ ತಮ್ಮ ಛಾಪು ಮೂಡಿಸಿಲ್ಲ. ಹಾಗೆಯೇ ದಾಸರಿ ಶ್ರೀನಿವಾಸ್
ಛಾಯಾಗ್ರಹಣದಲ್ಲಿ ಕೂಡ ಯಾವುದೇ ವಿಶೇಷತೆಯನ್ನು ಹುಡುಕುವ ಹಾಗಿಲ್ಲ. ನಟ ಪ್ರೇಮ್ ತಮ್ಮ ಆಡುಭಾಷೆಯ
ಮಾತುಗಳಿಂದ ಇಷ್ಟವಾದರೆ ರಘು ತಮ್ಮದೇ ಶೈಲಿಯ ಹಾವಭಾವ ಮಿಶ್ರಿತ ಸಂಭಾಷಣೆ ಒಪ್ಪಿಸುವ ಪರಿಯಿಂದಾಗಿ
ಗಮನ ಸೆಳೆಯುತ್ತಾರೆ. ಆದರೆ ಚಿತ್ರಕಥೆ-ಕಥೆ ಚಿತ್ರವನ್ನು ಒಂದು ಮಟ್ಟಕ್ಕೆ ಕೆಳಗಿಳಿಸಿ ಬಿಡುತ್ತದೆ. ನಿರ್ದೇಶ  ರಮೇಶ್ ಬಗ್ಗೆ ಒಂದಷ್ಟು ಮಾತುಗಳನ್ನು ಹೇಳಲೇಬೇಕಾಗುತ್ತದೆ. ಸಂಭಾಷಣೆಕಾರರಾಗಿ ದೊಡ್ಡ ಹೆಸರು ಗಳಿಸಿದ ರಮೇಶ್ ದರ್ಶನ್ ಅಭಿನಯದ ಧ್ರುವ ಚಿತ್ರದ ಮೂಲಕ ನಿರ್ದೇಶಕರಾದವರು. ಆನಂತರ ಸುದೀಪ ಅಭಿನಯದ ಧಂ ನಿರ್ದೇಶನ ಮಾಡಿ ಸೈ ಎನಿಸಿಕೊಂಡವರು. ಇತ್ತೀಚಿಗೆ ನಿರ್ಮಾಪಕರಾಗಿ ಕೂಡ ಗಮನ ಸೆಳೆದವರು. ಆದರೆ ನಿರ್ದೇಶಕರಾಗಿ ತಮ್ಮ ಹಿಡಿತ ಕಳೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಇತ್ತೀಚಿಗೆ ಕಾಡುತ್ತಿದೆ. ಅದಕ್ಕೆ ಕಾರಣವೂ ಇದೆ. ಈ ಹಿಂದೆ ಅವರೇ ನಿರ್ದೇಶನದ ನಾಯಕ ನಟ ಆದಿತ್ಯ ಅಭಿನಯದ ವಿಲನ್ ಎನ್ನುವ ಚಿತ್ರವೊಂದು ಬಂದಿತ್ತು. ಅದೋ ಕೂಡ ಸಂತೆಗೆ ಮೂರುಮೊಳ ಎನ್ನುವ ರೀತಿಯಲ್ಲಿತ್ತು. ಈಗ ದಾಸವಾಳ ಕೂಡ ಅದೇ ರೀತಿಯಾಗಿದೆ. ಇನ್ನು ಮುಂದಾದರೂ ರಮೇಶ್ ರಂತಹ ಹಿರಿಯ ನಿರ್ದೇಶಕರು ಎಚ್ಚೆತ್ತುಕೊಂಡು ಉತ್ತಮ ಕಥೆಯ ಚಿತ್ರಗಳನ್ನು ನಿರ್ದೇಶನ ಮಾಡದಿದ್ದರೆ ಪ್ರೇಕ್ಷಕ ಗಂಭೀರವಾಗಿ ತೆಗೆದುಕೊಳ್ಳದೆ ಇರುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗಿಲ್ಲ.

No comments:

Post a Comment